ಪ್ರಥಮ ಸಂಪಾದಕೀಯದ ಮೊದಲ ಮಾತುಗಳು. . . . .
“ಧರ್ಮದ ಪರಿಪೂರ್ಣವಿಸ್ತಾರದಲ್ಲಿ ಜ್ಞಾನ (ಆತ್ಮ) ವಿಜ್ಞಾನ (ಸೃಷ್ಟಿ)ಗಳು ಸಹಜವಾಗಿ ರೂಪುಗೊಂಡಿವೆ. ಆದ್ದರಿಂದಲೇ ಸಮಸ್ತವೂ ಧರ್ಮಸ್ವರೂಪಿಯಾದ ತಾಯಿಬೇರನ್ನೇ ಅವಲಂಬಿಸಿದೆ. ಆ ಕಾರಣದಿಂದಲೇ ಈ ಧರ್ಮವಿಮರ್ಶಿನೀ ಮಾಸಪತ್ರಿಕೆಯು ಆಧ್ಯಾತ್ಮ ವಿಚಾರಗಳಿಗೆ ಮಾತ್ರ ಮೀಸಲಾಗಿರದೆ ಆತ್ಮಮೂಲದಿಂದ ಹೊರಬಂದ ಸಮಸ್ತ ವಿದ್ಯೆ-ಕಲೆಗಳ ಬಗ್ಗೆಯೂ ತನ್ನನ್ನು ವ್ಯಾಪಿಸಿಕೊಂಡಿದೆ. ಪರಮಾತ್ಮಾನುಭವದ ಬೇರಿನಿಂದ ಅರಳುವ ವಿಚಾರ-ವಿವೇಕ-ಆಚಾರ-ಅನುಷ್ಠಾನ ಮುಂತಾದ ಪುಷ್ಪಗಳು ಇಲ್ಲಿ ಫಲಿತಗೊಳ್ಳಲಿವೆ. ಇತಿಹಾಸದ ಪುಟಪುಟಗಳನ್ನು ಹೊಂಬಣ್ಣದಲ್ಲಿ ಬೆಳಗಿದ ಜ್ಞಾನಿಗಳ-ಮಹಾಯೋಗಿಗಳ ಜೀವನ-ಸಾಹಿತ್ಯಗಳ ಚಿಂತನೆ ಇಲ್ಲಿ ಒಡಮೂಡಲಿದೆ. ಮಾತ್ರವಲ್ಲದೆ ಆಧುನಿಕವಿಜ್ಞಾನದ ಶೋಧನೆಗಳ ಅಂಶಗಳು ಭಾರತೀಯಸಂಸ್ಕೃತಿಗೆ ಎಲ್ಲೆಲ್ಲಿ ಪೋಷಕವಾಗಿವೆ ಎನ್ನುವ ವಿಷಯವನ್ನೂ ಪತ್ರಿಕೆ ಪ್ರಸ್ತುತಗೊಳಿಸಲಿದೆ. ಪತ್ರಿಕೆಯ ವ್ಯಾಪಕವಾದ ಧ್ಯೇಯಧೋರಣೆಗೆ ಹೊಂದಿಕೊಳ್ಳುವ ಎಲ್ಲ ಮತ ಸಂಪ್ರದಾಯಗಳ ಸದ್ವಿಚಾರಗಳಿಗೂ ತೆರೆದ ಬಾಗಿಲ ಸ್ವಾಗತವಿದೆ. “ಪುರಾಣಮಿತ್ಯೇವ ನ ಸಾಧು ಸರ್ವಂ- ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಸ್ವೀಕಾರ್ಹವಲ್ಲ” ಎನ್ನುವ ಕವಿವಾಣಿಯಂತೆ ಹಳತು-ಹೊಸತು, ನಮ್ಮದ್ದು, ಪರರದ್ದು ಎನ್ನುವ ಭೇದವಿಲ್ಲದೆ ಆದರ್ಶ ಮಾನವಧರ್ಮವನ್ನು ಎತ್ತಿ ಹೇಳುವುದು ಪತ್ರಿಕೆಯ ಧ್ಯೇಯವಾಗಿದೆ.”
ವಿದ್ವಾನ್ ಸಿ. ಜಗದೀಶ ಶರ್ಮಾ, ಎಂ. ಎ.
ಸಂಪಾದಕ












