ಧ್ಯೇಯ ವಾಕ್ಯ
ಇತಿಹಾಸ:
ಸನಾತನಧರ್ಮದ ಲೋಕಹಿತ ಮೌಲ್ಯಗಳನ್ನು ಬಿತ್ತರಿಸಲು ೨೦೦೦ ನೇ ಇಸವಿ ಅಕ್ಟೋಬರ್ ತಿಂಗಳಿನಲ್ಲಿ ಲೋಕಾರ್ಪಣಗೊಂಡ ಪತ್ರಿಕೆ ‘ಧರ್ಮಭಾರತೀ’. ಆರಂಭಗೊಂಡು ಸಾರ್ಥಕತೆಯ ೭ನೇ ವರ್ಷವನ್ನು ಪೂರೈಸಿ ೮ನೇ ವರ್ಷದಲ್ಲಿ ಯಶಸ್ವೀಪಥದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಹರಿಕಾರನಾಗಿ ಸಾಗುತ್ತಿದೆ. ಮಂಗಲಭಾರತೀ, ನುಡಿದೀವಿಗೆ, ಗುರುಭಾರತೀ, ಬಾಲಭಾರತೀ, ಗೋಷ್ಠೀ, ಹಬ್ಬಹರಿದಿನ, ಪ್ರಾಚೀನಭಾರತದ ವೈಜ್ಞಾನಿಕಸಾಧನೆಗಳು, ಆಯುರ್ವೇದ ಮೊದಲಾದ ಅತ್ಯುಪಯುಕ್ತ, ಅಮೂಲ್ಯ ವಿಷಯಗಳೊಂದಿಗೆ ಸಾಂದರ್ಭಿಕ ಲೇಖನಗಳನ್ನು ಹೊಂದಿ ಪ್ರತಿಮಾಸವೂ ಜನಮಾನಸಕ್ಕೆ ಸಂಸ್ಕಾರ ನೀಡುತ್ತಿರುವ ಪತ್ರಿಕೆಯಲ್ಲಿ ಈವರೆಗೆ ೧೦ ವಿಷಯಗಳ ಲೇಖನಮಾಲಿಕೆ ಪ್ರಕಟಗೊಂಡಿದೆ. ‘ಗುರುಭಾರತೀ’ ಶೀರ್ಷಿಕೆಯಡಿಯಲ್ಲಿ ಶ್ರೀಶ್ರೀಗಳವರ ೮೧ ಲೇಖನಗಳು, ೬೭ ಸಂಪಾದಕೀಯ ಬರಹಗಳು, ೨ ಚಿತ್ರಕಥೆಗಳು, ನಾಡಿನ ಶ್ರೇಷ್ಠ ವಿದ್ವಾಂಸರ ೩೫೬ ಅಮೂಲ್ಯ ಲೇಖನಗಳು ಪ್ರಕಟಗೊಂಡು ಪತ್ರಿಕೆಯ ಮೌಲ್ಯ ಹೆಚ್ಚಿಸಿವೆ. ‘ರಾಮ-ರಾಮ-ರಾಮ’, ‘ಸಸ್ಯಸಂಜೀವಿನೀ’, ‘ಭಾರತರ ಆಹಾರಸಂಪತ್ತು’, ‘ರಾಜಾ ಕಾಲಸ್ಯ ಕಾರಣಮ್’, ಭಾರತೀಯ ಗೋವಂಶವೈಭವ’ ಮತ್ತು ‘ಸನಾತನಭಾರತ’ ಈ ವಿಷಯಗಳ ವಿಶೇಷಸಂಚಿಕೆಯನ್ನು ಲೋಕಾರ್ಪಣಗೊಳಿಸಿದೆ. ಪ್ರಾರಂಭದ ದಿನಗಳಲ್ಲಿ ೨೦೦೦ ಚಂದಾದಾರರನ್ನು ಹೊಂದಿದ್ದ ಪತ್ರಿಕೆ ೮ ನೇ ವರ್ಷದಲ್ಲಿ ೮೨೭೦ ಚಂದಾದಾರರನ್ನು ಹೊಂದಿ ಜ್ಞಾನಪ್ರಸಾರ ಕಾರ್ಯವನ್ನು ಮಾಡುತ್ತಿದೆ. ನಮ್ಮ ರಾಜ್ಯ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳ ಹಾಗೂ ವಿದೇಶಗಳಲ್ಲೂ ಓದುಗರ ಅಭಿಮಾನವನ್ನು ಹೊಂದಿದ ಪತ್ರಿಕೆ ಧಾರ್ಮಿಕಪತ್ರಿಕೆಗಳ ಸಾಲಿನಲ್ಲಿ ವಿಶಿಷ್ಟಸ್ಥಾನವನ್ನು ಹೊಂದಿ ರಾರಾಜಿಸುತ್ತಿದೆ.












